ಇಷ್ಟಾರ್
ಬ್ಯಾಬಿಲೋನಿಯ ಮತ್ತು ಅಸ್ಸೀರಿಯಗಳ ಒಬ್ಬ ದೇವತೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿವೆ : ಕ್ಯನ್ನಾನ್‍ನಲ್ಲಿ ಅಷ್ಟಾರ್ಟ್, ಮೆಸಪೊಟೇಮಿಯದಲ್ಲಿ ಅಟ್ಟಾರ್, ಮೋಯಬ್‍ನಲ್ಲಿ ಅಷ್ಟಾರ್, ದಕ್ಷಿಣ ಆಫ್ರಿಕದಲ್ಲಿ ಅಥ್‍ಟಾರ್, ಅಬಿಸಿನಿಯದಲ್ಲಿ ಅಸ್ಟಾರ್-ಹೀಗೆ.

	ಈ ದೇವತೆಯ ಕಲ್ಪನೆಗೆ ಸುಮೇರಿಯದ ಅಥವಾ ಬ್ಯಾಬಿಲೋನಿಯದ ಮೂಲ ನಿವಾಸಿಗಳು ಕಾರಣರಲ್ಲ. ಸಿಮಿಟಿಕ್ ವಲಸೆಗಾರರು ಈ ದೇವತೆಯನ್ನು ಬ್ಯಾಬಿಲೋನಿಯಕ್ಕೆ ತಂದು ಸ್ಥಾಪಿಸಿದರು. ಸಿಮಿಟಿಕ್ ವಲಸೆಗಾರರು ಬ್ಯಾಬಿಲೋನಿಯಕ್ಕೆ ಬಂದಾಗ ಅಲ್ಲಿಯ ಜನ ಅನೇಕ ನಾಡು ದೇವತೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ವಲಸೆಗಾರರು ಆ ನಾಡು ದೇವತೆಗಳ ಲಕ್ಷಣಗಳನ್ನೆಲ್ಲ ಒಳಗೊಂಡಂತೆ ಇಷ್ಟಾರ್ ದೇವತೆಯ ಭಾವನೆಯನ್ನು ಬೆಳೆಸಿದರು. ಕಾಲಕ್ರಮದಲ್ಲಿ ನಾಡದೇವತೆಗಳು ಲುಪ್ತವಾಗಿ ಅವುಗಳ ಸ್ಥಾನವನ್ನು ಇಷ್ಟಾರ್ ದೇವತೆ ಆಕ್ರಮಿಸಿದಳು. ಹೀಗೆ ಇಷ್ಟಾರ್ ದೇವತೆಯಲ್ಲಿ ಐಕ್ಯಗೊಂಡ ಕೆಲವು ದೇವತೆಗಳು-ಎರಿಚ್ಚಿನ ಇನ್ನನ್ನ ದೇವತೆ, ಸೈನಿವೇಯ ನಿನಾ ದೇವತೆ, ನಿಪ್ಪೂರ್‍ನ ನಿನ್-ಲಿಲ್ ದೇವತೆ, ಬ್ಯಾಬಿಲಾನಿನ ಜರ್‍ಪನಿಟ್ (ಮರ್‍ಡುಕ್ ದೇವರ ಹೆಂಡತಿ) ದೇವತೆ.

	ಹೀಗೆ ಅನೇಕ ದೇವತೆಗಳ ಲಕ್ಷಣಗಳನ್ನು ಒಳಗೊಂಡು ಬೆಳೆದ ಇಷ್ಟಾರ್ ದೇವತೆಯ ಸ್ವರೂಪ ತುಂಬ ಸಂಕೀರ್ಣವಾದದ್ದು. ಇವಳು ಪ್ರಥಮತಃ ಸಕಲ ಸಸ್ಯಗಳ ಮತ್ತು ಪ್ರಾಣಿಗಳ ಸೃಷ್ಟಿಗೆ ಕಾರಣಳಾದ ಮಾತೃ ದೇವತೆಯಾದಳು. ತಾಯಿಯಾದ ಇವಳು ಮಾನವರಲ್ಲಿ ವಿಶೇಷ ವಾತ್ಸಲ್ಯ ಪಡೆದಿರುತ್ತಾಳೆ; ನೊಂದ ಮಾನವರಿಗೆ ಅನುಕಂಪ ತೋರಿಸುತ್ತಾಳೆ. ಪಾಪ ಮಾಡಿದವರನ್ನು ಕರುಣೆಯಿಂದ ನೋಡಿ ಅವರನ್ನು ನಿರಂತರವಾಗಿ ತಿದ್ದುತ್ತಾಳೆ. ತನ್ನ ಮಂತ್ರಶಕ್ತಿಯಿಂದ ರಾಕ್ಷಸರನ್ನು ನಿರ್ಮೂಲಮಾಡಿ ಮಾನವರನ್ನು ಅವರ ಉಪಟಳದಿಂದ ರಕ್ಷಿಸುತ್ತಾಳೆ. ಯುದ್ದದಲ್ಲಿ ತನ್ನ ಭಕ್ತರಿಗೆ ಜಯಗಳಿಸುತ್ತಾಳೆ. ಮಾನವರ ಸಕಲ ಸಂಪದಭಿವೃದ್ಧಿಗೂ ಈಕೆ ಕಾರಣಳು. ಇವಳು ಬೆಳಗಿನ ಮತ್ತು ಸಂಜೆಯ ನಕ್ಷತ್ರ (ವೀನಸ್ ಎಂದರೆ ಶುಕ್ರಗ್ರಹ ರೂಪದಲ್ಲಿ ಕಾಣಿಸಿಕೊಂಡು ಜನರಿಗೆ ಉಂಟಾಗುವ ಶುಭಾಶುಭಗಳನ್ನು ಸೂಚಿಸುತ್ತಾಳೆ. ನಕ್ಷತ್ರದೇವತೆಯಾದ ಈಕೆ ಚಂದ್ರನ ಮಗಳು. ಕೆಲವು ಕಡೆಗಳಲ್ಲಿ ಸ್ವರ್ಗದ ರಾಣಿ ಅಥವಾ ಹೆಂಡತಿ ಎಂದು ವರ್ಣಿತಳಾಗಿದ್ದಾಳೆ.

ಇವಳಿಗೆ ಯಾವವಿಧದಿಂದ ಪೂಜೆ ಸಲ್ಲಿಸುತ್ತಿದ್ದರು ಎಂಬ ವಿಚಾರದಲ್ಲಿ ಸ್ಪಷ್ಟ ವಿವರಗಳು ದೊರೆತಿಲ್ಲ. ಈ ದೇವತೆಯ ಪೂಜೆಗಾಗಿ ಬ್ಯಾಬಿಲೋನಿಯದ ಮತ್ತು ಅಸ್ಸೀರಿಯದ ಮುಖ್ಯ ಪಟ್ಟಣಗಳಲ್ಲಿ ದೇವಾಲಯಗಳಿದ್ದುವೆಂಬುದು ಖಚಿತ. ಇವುಗಳಲ್ಲಿ ಇಷ್ಟಾರ್ ದೇವತೆಯ ವಿಗ್ರಹಗಳಿದ್ದವು. ಆಗಿನ ಕಾಲದ ಕಲೆಯ ಅವಶೇಷಗಳಿಂದ ಈ ದೇವತೆಗೆ ಕಿರೀಟ, ಕರ್ಣಕುಂಡಲ, ಹಾರ, ಕಟಿಸೂತ್ರ, ಬಳೆ, ಕಾಲ ಗೊಲಸು, ಕವಚ ಮುಂತಾದ ಅಲಂಕಾರಗಳು ಇದ್ದುವೆಂದು ಹೇಳಬಹುದು. ಭಕ್ತರು ಪೂಜೆಯ ಕಾಲದಲ್ಲಿ ಪರಿಮಳದ್ರವ್ಯಗಳನ್ನು, ಹಕ್ಕಿ, ಕುರಿಮರಿ, ಹಣ್ಣು ಕಾಯಿಪಲ್ಯಗಳನ್ನು, ಹಾಲಿನಿಂದ ಮತ್ತು ಹಿಟ್ಟಿನಿಂದ ಮಾಡಿದ ಭಕ್ಷ್ಯಭೋಜ್ಯಗಳನ್ನು ಉಡುಗೆ ಮತ್ತು ಆಭರಣಗಳನ್ನು ಅರ್ಪಿಸುತ್ತಿದ್ದರು. ಬೇಸಿಗೆಯಲ್ಲಿ ಗಿಡ ಮತ್ತು ಪೈರು ಒಣಗಿದಾಗ ಇಷ್ಟಾರಳ ಗಂಡ ಸತ್ತು ಕೆಳಗಿನ ಲೋಕಕ್ಕೆ ಹೋದನೆಂದು ಭಾವಿಸಿ ಭಕ್ತರು ಇವಳ ಗುಡಿಯಲ್ಲಿ ಶೋಕವನ್ನು ಪ್ರದರ್ಶಿಸುತ್ತಿದ್ದರು. ಆದಾದ ಮುಂದಿನ ತಿಂಗಳಲ್ಲಿ ಇಷ್ಟಾರ್ ಕೆಳಗಿನ ಲೋಕಕ್ಕೇ ಹೋಗಿ ತನ್ನ ಗಂಡನನ್ನು ಕರೆದುಕೊಂಡು ಬರುವಳೆಂದು ಉತ್ಸಾಹ ಪ್ರದರ್ಶಿಸುತ್ತಿದ್ದರು. ಈ ಎರಡೂ ವಿಶೇಷ ಪೂಜೆಯ ಕಾಲಗಳು.

ಇಷ್ಟಾರ್ ದೇವತೆಯ ಪೂಜೆ ಕಾಲಕ್ರಮದಲ್ಲಿ ಬ್ಯಾಬಿಲೋನಿನಿಂದ ಪರ್ಷಿಯ, ಮೆಸೆಪೊಟೇಮಿಯ, ಸಿರಿಯ, ಪ್ಯಾಲಸ್ಟೈನ್, ಗ್ರೀಸ್ ಮತ್ತು ಇಟಲಿಗಳಿಗೆ ಹಬ್ಬಿತು. ಸೆಲೂಸಿಡ್ ಗ್ರೀಕರ ಮತ್ತು ಪ್ರಾಚೀನ ರೋಮನರ ಆಳ್ವಿಕೆಯ ಕಾಲದಲ್ಲಿ ಪೂರ್ವದೇಶಗಳ ಮತ್ತು ಪಶ್ಚಿಮದೇಶಗಳ ಮತಗಳು ಬೆರೆತು ಪುಷ್ಟಿಗೊಂಡಾಗ ಗ್ರೀಕರ ಮತ್ತು ರೋಮನ್ನರ ಕೆಲವು ದೇವತೆಗಳು ಬ್ಯಾಬಿಲೋನಿಯ ದೇವತೆಗಳ ಪಡಿರೂಪಗಳಾದುವು. ಜó್ಯೂಸ್, ಜೂಪಿಟರ್ ಬ್ಯಾಬಿಲೋನಿಯದ ಬೆಲ್ ಮತ್ತು ಮರ್ ಚುಕ್ ದೇವರುಗಳ ಪಡಿರೂಪಗಳಾಗಿರುವಂತೆ ಗ್ರೀಕರ ಮತ್ತು ರೋಮನರ ಅಪ್ರೊಡೈಟ್, ವೀನಸ್ಸರು ಬ್ಯಾಬಿಲೋನಿಯದ ಇಷ್ಟಾರ್ ದೇವತೆಯ ಪಡಿರೂಪಗಳು.	 

   (ಜಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ